ಪಶ್ಚಾತ್ತಾಪ -
	ಮಾಡಿದ ಪಾಪಕೃತ್ಯಗಳಿಂದ ದೂರವಾಗಿ ಸನ್ಮಾರ್ಗಕ್ಕೆ ಬರಲು ಮಾನವರಿಗೆ ಇರುವ ಒಂದು ದಾರಿ. ರೋಗ ಬಂದಾಗ ಮನುಷ್ಯ ಔಷಧಿ ಸೇವಿಸುತ್ತಾನೆ. ಪಥ್ಯ ಮಾಡುತ್ತಾನೆ. ಉಚಿತ ಶೂಶ್ರೂಷೆ ತೆಗೆದುಕೊಳ್ಳುತ್ತಾನೆ. ಆಗ ರೋಗನಿವಾರಣೆಯಾಗಿ ಆರೋಗ್ಯ ಮತ್ತೆ ಕಾಣಿಸಿಕೊಳ್ಳುತ್ತದೆ. ಈ ಮಾತು ಮನುಷ್ಯ ತಿಳಿದೊ ತಿಳಿಯದೆಯೊ ಮಾಡಿದ ಪಾಪಕೃತ್ಯಗಳಿಗೂ ಅನ್ವಯವಾಗುತ್ತದೆ. ಅಗತ್ಯಗಳಿಂದಾಗಿ ಮನುಷ್ಯ ಕದಿಯಬಹುದು. ಸುಳ್ಳು ಹೇಳಬಹುದು. ವ್ಯಭಿಚಾರ ನಡೆಸಬಹುದು. ಇಂಥ ತಪ್ಪುಗಳಿಗೆ ಶಿಕ್ಷೆಕೊಡುವ ಅಗತ್ಯ ಇದ್ದೇ ಇದೆ. ಆದರೆ ಕಳ್ಳಸುಳ್ಳ ವ್ಯಭಿಚಾರಿ ತಾನು ಮಾಡಿದ್ದು ಪಾಪ, ಸರಿಯಲ್ಲದ ಕೆಲಸ ಎಂದು ತಿಳಿದು ತಪ್ಪೊಪ್ಪಿಕೊಳ್ಳಲು ಅವಕಾಶ ಇರಬೇಕಾದ್ದು ಅಗತ್ಯ, ದೇವರಿಗೋ ಗುರುಹಿರಿಯರಿಗೊ ಗ್ರಾಮದ ಪಂಚಾಯಿತಿ ಸಭೆಗೂ ನಮಸ್ಕರಿಸಿ ತಾನು ಮಾಡಿದ ಪಾಪದ ವರದಿಯನ್ನು ಒಪ್ಪಿಸಿ ಮುಂದೆ ತಾನು ಸನ್ಮಾರ್ಗದಲ್ಲಿರುವುದಾಗಿ ಭರವಸೆ ಕೊಟ್ಟಲ್ಲಿ ಪ್ರಾಯಶ್ಚಿತ್ತ ಮಾಡಿಕೊಂಡ ಹಾಗಾಯಿತು. ಕೆಲವು ವೇಳೆ ತಪ್ಪಿತಸ್ಥ ತಪ್ಪುಕಾಣಿಕೆ ಕೊಡಬೇಕಾಗುತ್ತದೆ.

	ಬ್ರಾಹ್ಮಣರಲ್ಲಿ ಸ್ನಾನ ಆಚಮನ ಗಾಯತ್ರಿ ಜಪ ಪ್ರಾಣಾಯಾಮಗಳಿಂದ ದೇಹ ಮನಸ್ಸುಗಳು ಶುದ್ಧವಾಗುತ್ತವೆ ಎಂಬ ಆಚಾರ ವಿಧಾನವಿದೆ.

	ಕ್ರೈಸ್ತರಲ್ಲಂತೂ ತಪ್ಪುಮಾಡಿದ ವ್ಯಕ್ತಿ ಗುರುವಿನಲ್ಲಿಗೆ ಹೋಗಿ ಅವನ ಕಾಲು ಹಿಡಿದು ತಾನು ಮಾಡಿದ್ದನ್ನೆಲ್ಲ ವಿವರವಾಗಿ ತಿಳಿಸಿ ಕಣ್ಣೀರಿಟ್ಟು ಮುಂದೆ ತಾನು ಸರಿಯಾಗಿ ಇರುವುದಾಗಿ ಭಾಷೆ ಕೊಡುತ್ತಾನೆ. ಗುರು ಹೇಳಿದಂತೆ ನಡೆಯುತ್ತಾನೆ.
(ಡಿ.ಪಿ.ಎಸ್.; ಪಿ.ಆರ್.)

	ಅಹಲ್ಯೋದ್ಧಾರದ ಕಥೆ ಪ್ರಾಯಶ್ಚಿತ್ತದಿಂದ ಪೂತಳಾದ ಒಬ್ಬ ಹೆಣ್ಣು ಮಗಳ ಉಜ್ಜ್ವಲ ನಿದರ್ಶನವಾಗಿದೆ.

	ಪಾಪವಿಮೋಚನೆಗೆ ಇರುವ ದಾರಿಗಳು ಇವು: 1 ಪಶ್ಚಾತ್ತಾಪ, 2 ಪ್ರಾರ್ಥನೆ, 3 ಜಪ, 4 ದಾನ, 5 ಉಪವಾಸ, 6 ವ್ರತನೇಮಗಳು, 7 ತಪ, 8 ತೀರ್ಥ ಯಾತ್ರೆ, 9 ಯೋಗ, 10 ಯಜ್ಞಯಾಗಾದಿಗಳು.			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ